ಕೊಚಾನೋವ್‍ಸ್ಕಿ, ಜಾನ್

1530-1584, ಪೋಲಿಷ್ ಕವಿ ಮತ್ತು ನಾಟಕಕಾರ. ಪೋಲೆಂಡಿನ ರಾಡುಮ್ ಪ್ರದೇಶದ ಸೈಯಾನದ ಶ್ರೀಮಂತ ಕುಟುಂಬದಲ್ಲಿ ಜನಿಸಿದ. ಪೋಲೆಂಡು ಮತ್ತು ಪಾಡುವಗಳಲ್ಲಿ ವಿದ್ಯಾಭ್ಯಾಸ ಪಡೆದು ಯೂರೋಪಿನ ಕೆಲವು ಭಾಗಗಳಲ್ಲಿ ಪ್ರವಾಸಮಾಡಿ ಬಂದ ಅನಂತರ 1559 ರಿಂದ 15 ವರ್ಷಗಳಕಾಲ ರಾ
ಜನ ಆಸ್ಥಾನದಲ್ಲಿ ಅಧಿಕಾರಿಯಾಗಿದ್ದ. 1575ರ ವೇಳೆಗೆ ತನ್ನ ಸ್ವಂತ ಊರಿಗೆ ಮರಳಿ ಮದುವೆಯಾಗಿ, ಉಳುಮೆಯ ಜೀವನವನ್ನವಲಂಬಿಸಿದ.

	ಪ್ರಾಚೀನ ಸಾಹಿತ್ಯದಲ್ಲಿ ಆಳವಾಗಿ ಅಭ್ಯಾಸ ಮಾಡಿದ್ದ ಈತ ತನ್ನ ಬರೆವಣಿಗೆಯ ಮೊದಲ ವರ್ಷಗಳಲ್ಲಿ ಲ್ಯಾಟಿನ್ ಭಾಷೆಯಲ್ಲಿ ಪ್ರೇಮಗೀತೆಗಳನ್ನೂ ಶೋಕಗೀತೆಗಳನ್ನೂ ಚಾಟುಪದ್ಯಗಳನ್ನೂ ರಚಿಸಿದ. ರಾಜನ ಆಸ್ಥಾನದಲ್ಲಿದ್ದ ಕಾಲದಲ್ಲಿ ಲ್ಯಾಟಿನ್ ಹಾಗೂ ಪೋಲಿಷ್ ಭಾಷೆಯಲ್ಲಿ ಕವನ ರಚನೆಮಾಡಿದ. 1570ರ ಅನಂತರ ಪೋಲಿಷ್ ಭಾಷೆಯಲ್ಲಿ ಬರೆದ. ಪೀಸ್‍ನಿ ಎಂಬ ಗ್ರಂಥದಲ್ಲಿ ಈತನ ಪ್ರೇಮಗೀತೆಗಳೂ ದೇಶಪ್ರೇಮಗೀತೆಗಳೂ ತಾತ್ತ್ವಿಕ ಗೀತೆಗಳೂ ಅಡಕವಾಗಿವೆ. ಗ್ರೀಕ್ ಮಾದರಿಯಲ್ಲಿ ಈತ ಒಂದು ಉತ್ತಮ ನಾಟಕ ರಚಿಸಿದ್ದಾನೆ.

	ಪೋಲೆಂಡಿನ ಸಾಹಿತ್ಯದ ಸುವರ್ಣಯುಗಕ್ಕೆ ಸೇರಿದವನಾಗಿ ಈತ ಆ ಯುಗದ ಸಾಧನೆಗೆ ಅಸಾಧಾರಣ ಕೊಡುಗೆ ನೀಡಿದ್ದಾನೆ. ತನ್ನ ಕಾಲದ ಸ್ಲಾವ್ ಜಗತ್ತಿನ ಅತಿ ಶ್ರೇಷ್ಠ ಕವಿ ಎನಿಸಿದ ಈತ ಪೋಲೆಂಡಿನ ಮೊಟ್ಟಮೊದಲ ಅಭಿಜಾತ ಕವಿ; ಅಸಾಧಾರಣ ಮಾನವೀಯತಾವಾದಿ, ಪೋಲೆಂಡಿನ ರಾನ್‍ಸಾರ್ಡ್ (ಫ್ರೆಂಚ್ ಕವಿ) ಎಂದು ಈತನನ್ನು ಕರೆಯಲಾಗಿದೆ. ಪ್ರಾಚಿನ ಸಾಹಿತ್ಯ ಮತ್ತು ಮಾನವೀಯತೆಯ ಮನೋಧರ್ಮಗಳುಳ್ಳ ರಾಷ್ಟ್ರೀಯ ಕಾವ್ಯಸಾಹಿತ್ಯವನ್ನು ಪೋಲೆಂಡಿನಲ್ಲಿ ನಿರ್ಮಿಸಿದವನೀತ. ಉಪದೇಶವಾಗಲಿ ಮನೋರಂಜನೆಯಾಗಲಿ ಇವನ ಉದ್ದೇಶವಲ್ಲ. ಕಾವ್ಯಾಧಿದೇವತೆಗಳಿಗಾಗಿ ಮತ್ತು ನನಗಾಗಿ ನಾನು ಹಾಡಿಕೊಳ್ಳುತ್ತೇನೆ ಎಂದು ತನ್ನ ಕೃತಿಗಳ ಬಗ್ಗೆ ಈತ ಹೇಳಿಕೊಂಡಿದ್ದಾನೆ. ಹತ್ತೊಂಬತ್ತನೆಯ ಶತಮಾನದ ಮಿಕಿಫಿಕ್ಸ್ ಮತ್ತು ಸ್ಲವಕಿಗಳವರೆಗೆ ಇವನನ್ನು ಸರಿಗಟ್ಟುವ ಕವಿಗಳು ಪೋಲೆಂಡಿನಲ್ಲಿ ಹುಟ್ಟಲಿಲ್ಲ. 1580ರಲ್ಲಿ ತೀರಿಕೊಂಡ ತನ್ನ ಮಗಳ ನೆನಪಿಗೆ ಬರೆದ ಚರಮಗೀತೆಯೊಂದೇ ಸಾಕು ಇವನ ಹೆಸರನ್ನು ಅಮರಗೊಳಿಸಲು. ಡೇವಿಡನ ಸ್ತೋತ್ರಗೀತೆಯನ್ನು ಈತ ಉಜ್ವಲವಾಗಿ ಭಾಷಾಂತರಿಸಿದ್ದಾನೆ. 	 (ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ